ಜಿಎಸ್‍ಟಿ ಬಾಕಿ ಹಣ ಕೂಡಲೆ ಬಿಡುಗಡೆ ಮಾಡುವಂತೆ ಒತ್ತಾಯ

ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ ರಾಜ್ಯ ಸರ್ಕಾರ

 | 
basavaraj bommai

ಬೆಂಗಳೂರು: ರಾಜ್ಯ ಸರಕಾರಕ್ಕೆ ಕೇಂದ್ರದಿಂದ ಬರಬೇಕಾಗಿರುವ 11 ಸಾವಿರ ಕೋಟಿ ರೂಪಾಯಿಗಳ ಜಿಎಸ್‍ಟಿ ಪರಿಹಾರ ನಷ್ಟದ ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಿದೆ.

ಶುಕ್ರವಾರ ನಡೆದ ಜಿಎಸ್‍ಟಿ ಮಂಡಳಿಯ 43ನೆ ಸಭೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ ಜಿಎಸ್‍ಟಿ ಮಂಡಳಿಯ ರಾಜ್ಯ ಪ್ರತಿನಿಧಿ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು, 2020- 21ನೇ ಸಾಲಿನಲ್ಲಿ ರಾಜ್ಯಕ್ಕೆ ಬರಬೇಕಾಗಿರುವ ರೂ. 11 ಸಾವಿರ ಕೋಟಿ ಪರಿಹಾರವನ್ನು ಶೀಘ್ರದಲ್ಲಿ ಬಿಡುಗಡೆ ಮಾಡಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದ್ದಾರೆ.

ಜಿಎಸ್‍ಟಿ ಪರಿಹಾರ ಸೆಸ್‍ನಲ್ಲಿಯೂ ಬಾಕಿ ಉಳಿದಿರುವ ಹಣವನ್ನು ರಾಜ್ಯಕ್ಕೆ ಬಿಡುಗಡೆ ಮಾಡಬೇಕು. ಜಿಎಸ್ಟಿ ನಷ್ಟ ಪರಿಹಾರ ಒದಗಿಸುವ ಸೌಲಭ್ಯ 2021- 2022ಕ್ಕೆ ಮುಕ್ತಾಯಗೊಳ್ಳಲಿದೆ. ಆದರೆ, 2021- 2022ರ ನಂತರವೂ ಜಿಎಸ್'ಟಿ ನಷ್ಟ ಪರಿಹಾರ ಸೌಲಭ್ಯವನ್ನು ಮುಂದುವರಿಸುವ ಕುರಿತು ಚರ್ಚೆ ನಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇದೇ ವೇಳೆ ದೇಶಾದ್ಯಂತ ಕೊರೋನಾ ವೈರಸ್ ಎರಡನೇ ಅಲೆಯ ಸಾಂಕ್ರಾಮಿಕದಿಂದ ತತ್ತರಿಸಿರುವ ಎಲ್ಲಾ ರಾಜ್ಯಗಳು ಅಗತ್ಯ ಸೇವೆಯಾದ ಕೋವಿಡ್-19 ಔಷಧ ಸೇರಿದಂತೆ ವೈದ್ಯಕೀಯ ಪರಿಕರಗಳು ಹಾಗೂ ಆರೋಗ್ಯ ಸೇವೆಗಳ ಮೇಲಿನ ಜಿಎಸ್​ಟಿ ದರವನ್ನು ಕಡಿತ ಮಾಡುವಂತೆ ಮನವಿ ಮಾಡಿವೆ.