ಬಿಜೆಪಿ ಪಾಲಿಸಿಕೊಂಡು ಬಂದ ಸಂಸ್ಕೃತಿ ಇಂದು ಅವರಿಗೆ ತಿರುಗುಬಾಣವಾಗಿದೆ: ಹೆಚ್.ಡಿ.ಕೆ

ಹಿಂದೆ ಮಾಡಿದ್ದರ ಪಾಪದ ಫಲವನ್ನು ಬಿಜೆಪಿ ಇಂದು ಅನುಭವಿಸುವಂತಾಗಿದೆ ಎಂದು ಆಕ್ರೋಶ

 | 
HD Kumaraswamy

ಬೆಂಗಳೂರು: ಜಿಂದಾಲ್ ಕಂಪನಿಗೆ ಬಿಜೆಪಿ ಸರ್ಕಾರ ಭೂಮಿ ಪರಬಾರೆ ಮಾಡಲು ಹೋಗಿ ಸಾರ್ವಜನಿಕರ ವಿರೋಧಕ್ಕೆ ಮಣಿದು ಜಿಂದಾಲ್ ಗೆ ಭೂಮಿಯನ್ನು ನೀಡುವುದನ್ನು ಕೈಬಿಟ್ಟ ಸರ್ಕಾರದ ನಡೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಪ್ರತಿಕ್ರಿಯೆ ನೀಡಿದ್ದು, ಸರ್ಕಾರದ ವಿರಿದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಜಿಂದಾಲ್‌ ಕಂಪನಿಗೆ 3,667 ಎಕರೆ ಭೂಮಿ ನೀಡಲು ನಿರ್ಧರಿಸಿದ್ದ ಬಿಜೆಪಿ ಸರ್ಕಾರ ಈಗ ತನ್ನೊಳಗಿನ ಬಂಡಾಯದಿಂದ, ಅನಿವಾರ್ಯವಾಗಿ ಹಿಂದೆ ಸರಿದಿದೆ. ರಾಜಕೀಯ ಪಕ್ಷವೊಂದು ದ್ವಿಮುಖ ಧೋರಣೆ ರಾಜಕಾರಣ ಮಾಡಬಾರದು ಎಂಬುದಕ್ಕೆ ಇದು ನಿದರ್ಶನ. ಹಿಂದೆ ಮಾಡಿದ್ದರ ಪಾಪದ ಫಲವನ್ನು ಬಿಜೆಪಿ ಇಂದು ಅನುಭವಿಸುವಂತಾಗಿದೆ. ಆದರೆ, ನಷ್ಟ ಜಾಸ್ತಿಯೇ ಆಗಿದೆ ಎಂದು ಹೇಳಿದ್ದಾರೆ.

ಜಿಂದಾಲ್‌ಗೆ ಲೀಸ್‌ ಕಂ ಸೇಲ್‌ ಆಧಾರದಲ್ಲಿ ಭೂಮಿ ನೀಡಲಾಗಿತ್ತು. ಲೀಸ್‌ ಅವಧಿ ಮುಗಿದಿದ್ದರಿಂದ ಕ್ರಯಪತ್ರ ಮಾಡಿಕೊಡಬೇಕಾಗಿತ್ತು. ಅಷ್ಟನ್ನು ಮಾತ್ರ ಮಾಡಲು ಮುಂದಾಗಿದ್ದ ನನ್ನ ಸರ್ಕಾರದ ವಿರುದ್ಧ ಯಡಿಯೂರಪ್ಪನವರು ಸಲ್ಲದ ಆರೋಪ ಮಾಡಿದ್ದರು. ಆದರೆ ಈಗ? ಅವರು ಅಂದು ನನ್ನ ಮೇಲೆ ಮಾಡಿದ ಆರೋಪಗಳನ್ನೆಲ್ಲ ತಮ್ಮ ಮೇಲೆ ಹೊತ್ತುಕೊಳ್ಳುವಂಥಾಗಿದೆ ಎಂದಿದ್ದಾರೆ.

ವಿರೋಧಕ್ಕಾಗಿ ವಿರೋಧ ಮಾಡುವುದು, ವಿರೋಧ ಪಕ್ಷದಲ್ಲಿದ್ದಾಗ ವಿರೋಧಿಸಿದ್ದನ್ನೇ ಆಡಳಿತಕ್ಕೆ ಬಂದಾಗ ಕದ್ದು ಮುಚ್ಚಿ ಮಾಡುವುದು ಬಿಜೆಪಿ 'ಸಂಸ್ಕೃತಿ'. ಬಿಜೆಪಿ ಪಾಲಿಸಿಕೊಂಡು ಬಂದ ಈ ಸಂಸ್ಕೃತಿ ಇಂದು ಅವರಿಗೆ ತಿರುಗುಬಾಣವಾಗಿದೆ. ನಾವು ಮಾಡಿದ ಕರ್ಮಗಳು ನಮ್ಮನ್ನು ಹಿಂಬಾಲಿಸಿಕೊಂಡು ಬಂದು ಪಾಠ ಕಲಿಸುತ್ತವೆ ಎಂಬುದಕ್ಕೆ ಜಿಂದಾಲ್‌ ಸಾಕ್ಷಿ ಎಂದು ತಿಳಿಸಿದ್ದಾರೆ.