ಮಹಾಲಾಕ್‍ಡೌನ್‍ನಿಂದ ಕಾರ್ಖಾನೆ ಬಂದ್ ನಡೆದು ಬೆಳಗಾವಿ ಸೇರಿದ ಕಾರ್ಮಿಕರು
ತಮ್ಮೂರಿಗೆ ತೆರಳಲು ರೈಲಿಗಾಗಿ ಕಾದು ಕುಳಿತ ಉತ್ತರಪ್ರದೇಶದ ಕಾರ್ಮಿಕರು

ಬೆಳಗಾವಿ: ಮಹಾರಾಷ್ಟ್ರ ಗಡಿಯ ಶಿನ್ನೋಳಿ ಗ್ರಾಮದ ಸ್ಟೀಲ್ ಕಾರ್ಖಾನೆ ಲಾಕ್‍ಡೌನ್‍ನಿಂದ ಬಂದ್ ಆಗಿದೆ. ಈ ಹಿನ್ನೆಲೆಯಲ್ಲಿ ಅತಂತ್ರಗೊಂಡಿರುವ ಕಾರ್ಮಿಕರು ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಉತ್ತರ ಪ್ರದೇಶ ಗೋರಖಪುರದ 6 ಕಾರ್ಮಿಕರು ಶಿನ್ನೋಳಿಯಿಂದ ಕಾಲ್ನಡಿಗೆ ಮೂಲಕ ಬೆಳಗಾವಿ ರೈಲ್ವೆ ನಿಲ್ದಾಣ ತಲುಪಿದ್ದು, ತಮ್ಮೂರಿಗೆ ತೆರಳಲು ರೈಲಿಗಾಗಿ ಕಾದು ಕುಳಿತಿದ್ದಾರೆ. ಲಾಕ್‍ಡೌನ್‍ನಿಂದ ತಾವು ಅನುಭವಿಸಿದ ಸಂಕಷ್ಟವನ್ನು ಹೇಳಿಕೊಂಡಿದ್ದಾರೆ.
ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕು ತಡೆಗೆ ಕಟ್ಟು ನಿಟ್ಟಿನ ಲಾಕ್‍ಡೌನ್ ಜಾರಿಯಲ್ಲಿದೆ. ಎಲ್ಲ ಕಾರ್ಖಾನೆಗಳನ್ನು ಬಂದ್ ಮಾಡಲಾಗಿದೆ. ಅತಂತ್ರಗೊಂಡ ಕಾರ್ಮಿಕರು ತಮ್ಮ ಮೂಲ ನೆಲೆಗಳಿಗೆ ಹೋಗತೊಡಗಿದ್ದಾರೆ. ಮಹಾರಾಷ್ಟ್ರ ಗಡಿಯ ಶಿನ್ನೋಳಿ ಗ್ರಾಮದ ಸ್ಟೀಲ್ ಕಾರ್ಖಾನೆ ಲಾಕ್‍ಡೌನ್‍ನಿಂದ ಬಂದ್ ಆಗಿದ್ದು, ಉತ್ತರ ಪ್ರದೇಶ ಗೋರಖಪುರದ 6 ಕಾರ್ಮಿಕರು ಶಿನ್ನೋಳಿಯಿಂದ ಕಾಲ್ನಡಿಗೆ ಮೂಲಕ ಬೆಳಗಾವಿ ರೈಲ್ವೆ ನಿಲ್ದಾಣಕ್ಕೆ ಹೊರಟಿದ್ದಾರೆ.
ಹಿಂಡಲಗಾ ಗಣಪತಿ ದೇವಸ್ಥಾನದ ಬಳಿಯಿಂದ ತಮ್ಮ ಸಾಮಾನು, ಸರಂಜಾಮುಗಳೊಂದಿಗೆ ಬೆಳಗಾವಿ ರೈಲ್ವೆ ನಿಲ್ದಾಣಕ್ಕೆ ತೆರಳುತ್ತಿದ್ದ 6 ಕಾರ್ಮಿಕರು ಇನ್ ನ್ಯೂಸ್ ಕ್ಯಾಮರಾ ಕಣ್ಣಿಗೆ ಬಿದ್ದರು. ಆಶ್ರಯ ಆಹಾರ ಅರಸುತ್ತ ಅಲೆದಿರುವ ಕಾರ್ಮಿಕರು ಊರು ಸೇರಿದರೆ ಸಾಕು ಎನ್ನುವ ಮುಖಭಾವ ಹೊತ್ತು, ಬೇರೆ ದಾರಿ ಕಾಣದೇ ನಡೆಯುತ್ತ ಹೊರಟದ್ದು ಲಾಕ್‍ಡೌನ್ ಸಂಕಷ್ಟಕ್ಕೆ ಸಾಕ್ಷಿ ಹೇಳಿತು.
ಈ ವೇಳೆ ಕಾರ್ಮಿಕ ಅಮಿತಕುಮಾರ್ ಪಾಂಡೆ ಮಾತನಾಡಿ, ಏನು ಮಾಡುವುದು? ಸ್ಟೀಲ್ ಕಾರ್ಖಾನೆಯಲ್ಲಿ ಕೆಲಸ ಮಾಡಲೆಂದು ಉತ್ತರ ಪ್ರದೇಶದಿಂದ ಬಂದು ಸೇರಿಕೊಂಡಿದ್ದೆವು. ಕೋವಿಡ್ ತಡೆಯಲು ಸರಕಾರ ಲಾಕ್‍ಡೌನ್ ಘೋಷಿಸಿದೆ. ಕೋವಿಡ್ ಬರುವುದನ್ನು ತಡೆಯುತ್ತೇನೆ, ಬಡವರು ಹಸಿವೆಯಿಂದ ಸಾಯಿರಿ ಎಂದು ಹೇಳಿದಂತಿದೆ. ಕೆಲಸ ಇಲ್ಲದಿದ್ದರೆ ಮಾಲಿಕರು ಸಂಬಳವನ್ನಾದರೂ ಎಲ್ಲಿ ಕೊಡುತ್ತಾರೆ? ಕಳೆದ ತಿಂಗಳ ಸಂಬಳ ಕೊಟ್ಟಿದ್ದಾರೆ. ಊರು ಸೇರಿದರಾಯಿತು ಎಂದು ಹೊರಟಿದ್ದೇವೆ. ಈ ಪರಿಸ್ಥಿತಿ ಆತಂಕ ಹುಟ್ಟಿಸುವಂತಿದೆ. ಉತ್ತರ ಪ್ರದೇಶದಿಂದ ಬಂದಿರುವ ಸಾಕಷ್ಟು ಕಾರ್ಮಿಕರು ಕಾರ್ಖಾನೆಗಳಲ್ಲಿ ದುಡಿಯುತ್ತಿದ್ದಾರೆ. ಬಹುತೇಕ ಎಲ್ಲರೂ ಊರಿಗೆ ತೆರಳುತ್ತಿದ್ದಾರೆ ಎಂದರು.
ಇನ್ನೊರ್ವ ಕಾರ್ಮಿಕ ಮಾತನಾಡಿ, ಕೋವಿಡ್ ಪರಿಸ್ಥಿತಿ, ಲಾಕ್‍ಡೌನ್, ಕಾರ್ಖಾನೆ ಬಂದ್, ಉಪವಾಸ, ವನವಾಸದ ಬಗ್ಗೆ ಕುಟುಂಬದವರಿಗೆ ಮಾಹಿತಿ ನೀಡಿದೆವು.ವಾಪಸ್ ಬಂದು ಬಿಡಿ ಎಂದು ಪಾಲಕರು ಒತ್ತಾಯ ಮಾಡತೊಡಗಿದ್ದಾರೆ. ಊರಿಗೆ ಸೇರುವುದು ಒಳ್ಳೆಯದು ಎಂದುಕೊಂಡು ಹೊರಟಿದ್ದೇವೆ. ಟ್ರೇನ್ ಟಿಕೆಟ್ ಬುಕ್ ಮಾಡಿದ್ದೇವೆ. 6 ಗಂಟೆಗೆ ಟ್ರೇನ್ ಬರುತ್ತದೆ. ಅಲ್ಲಿಯವರೆಗೂ ಕಾಯುತ್ತೇವೆ ಎಂದರು.
ಒಟ್ಟಿನಲ್ಲಿ ಲಾಕ್‍ಡೌನ್‍ನಿಂದ ದುಡಿಯುವ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಬೇರೆ ದಾರಿ ಕಾಣದೇ ಕಾರ್ಮಿಕ ವರ್ಗ ಊರು ಸೇರಲು ಹೊರಟಿದೆ. ಹೀಗಾದರೆ ಮುಂದೆ ಉತ್ಪಾದನೆ ಕ್ಷೇತ್ರಕ್ಕೆ ಭಾರಿ ಹೊಡೆತ ಬೀಳುವುದು ನಿಶ್ಚಿತವಾಗಿದ್ದು, ಬಡವರ ಸ್ಥಿತಿ ಇನ್ನಷ್ಟು ಗಂಭೀರವಾಗುವ ಆತಂಕ ಎದುರಾಗಿದೆ.