ಬಾಬಾ ನಿಮ್ನನ್ನು ಮರೆತು ಹೋಯಿತೇ ಭಾರತದ ಜನತೆ...

ಕಾರ್ಮಿಕ-ಮಹಿಳಾ ಕಾರ್ಮಿಕರಿಗೆ ಅಂಬೇಡ್ಕರ್ ಕೊಡುಗೆ ಅನನ್ಯ

 | 
ಬಾಬಾ ನಿಮ್ನನ್ನು ಮರೆತು ಹೋಯಿತೇ ಭಾರತದ ಜನತೆ...

ಬಾಬಾಸಾಹೇಬರನ್ನು ಮರೆತ ಕಾರ್ಮಿಕ ವರ್ಗ… ಮೇ 1 ರಂದು ವಿಶ್ವದೆಲ್ಲೆಡೆ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಜಗತ್ತಿನ ಕಾರ್ಮಿಕರೆಲ್ಲ ಒಂದಾಗಿರಿ ಎಂಬುದು ಈ ದಿನದ ಘೋಷವಾಕ್ಯವಾಗಿರುತ್ತದೆ. ಯಾವುದೇ ರಾಷ್ಟ್ರದ ಭವಿಷ್ಯವನ್ನು ರೂಪಿಸುವಲ್ಲಿ ಕಾರ್ಮಿಕರ ಪಾತ್ರ ಬಹು ದೊಡ್ಡದು.

ಅನಾದಿ ಕಾಲದಿಂದಲೂ, ಕಾರ್ಮಿಕ ವರ್ಗ ಜಗತ್ತಿನ ಹಿತಕ್ಕಾಗಿ ಹೆಣಗಾಡಿದೆ ಮತ್ತು ತ್ಯಾಗ ಮಾಡಿದೆ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಅನೇಕ ನಾಯಕರು ಕಾರ್ಮಿಕರ ಬದುಕಿಗೆ ದಾರಿದೀಪವಾಗಿದ್ದಾರೆ. ವಿಶೇಷವಾಗಿ ಭಾರತೀಯ ಸಂದರ್ಭದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಮಾತ್ರ ನಿಜವಾದ ಕಾರ್ಮಿಕ ನಾಯಕರಾಗಿ ಹೊರಹೊಮ್ಮಿದ್ದರು. ದುಂಡು ಮೇಜಿನ ಸಮ್ಮೇಳನದಲ್ಲಿ ಶೋಷಿತ ವರ್ಗಗಳ ಪ್ರತಿನಿಧಿಯಾಗಿ, ಅಂಬೇಡ್ಕರ್ ಅವರು ಕಾರ್ಮಿಕರ ಜೀವನ ವೇತನ, ಕೆಲಸದ ಪರಿಸ್ಥಿತಿಗಳು ಮತ್ತು ಕ್ರೂರ ಭೂಮಾಲೀಕರ ಹಿಡಿತದಿಂದ ರೈತರ ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸಿದರು. ಅಸ್ಪೃಶ್ಯರ ಜೀವನವನ್ನು ಹಾಳುಮಾಡಿದ ಸಾಮಾಜಿಕ ಅನಿಷ್ಟಗಳನ್ನು ತೆಗೆದುಹಾಕಲು ಅವರು ಹೋರಾಡಿದರು.

ಡಾ. ಅಂಬೇಡ್ಕರ್ ಅವರು ಭೂರಹಿತ ಬಡ ಗೇಣಿದಾರರು, ಕೃಷಿಕರು ಮತ್ತು ಕಾರ್ಮಿಕರ ಅಗತ್ಯತೆಗಳು ಮತ್ತು ಕುಂದುಕೊರತೆಗಳನ್ನು ಪೂರೈಸುವ ಸಮಗ್ರ ಕಾರ್ಯಕ್ರಮದೊಂದಿಗೆ 1936ರಲ್ಲಿ ಇಂಡಿಪೆಂಡೆಂಟ್ ಲೇಬರ್ ಪಾರ್ಟಿ (ಸ್ವತಂತ್ರ ಕಾರ್ಮಿಕ ಪಕ್ಷವನ್ನು) ಸ್ಥಾಪಿಸಿದರು. ಕಾರ್ಮಿಕರ ರಾಜಕೀಯ ಅಧಿಕಾರಕ್ಕಾಗಿ ಸ್ಥಾಪಿಸಲ್ಪಟ್ಟ ಮೊದಲ ಮತ್ತು ಏಕೈಕ ರಾಜಕೀಯ ಪಕ್ಷ ಇದಾಗಿತ್ತು.

1937 ರಲ್ಲಿ ನಡೆದ ಚುನಾವಣೆಯಲ್ಲಿ, ಈ ಪಕ್ಷವು ಬಾಂಬೆ ವಿಧಾನಸಭೆಗೆ ಸ್ಪರ್ಧಿಸಿದ್ದ 17 ಸ್ಥಾನಗಳಲ್ಲಿ 15 ಸ್ಥಾನಗಳನ್ನು ಗೆಲ್ಲುವ ಮೂಲಕ ಅದ್ಭುತ ಯಶಸ್ಸನ್ನು ಗಳಿಸಿತು. ಡಾ. ಅಂಬೇಡ್ಕರ್ ಅವರು 1937 ರಲ್ಲಿ ಬಾಂಬೆ ಅಸೆಂಬ್ಲಿಯಲ್ಲಿ ಜಮೀನುದಾರಿ ಪದ್ಧತಿಯ ರದ್ದತಿ ಮಸೂದೆಯನ್ನು ಮಂಡಿಸಿದರು. ಕಾರ್ಮಿಕರ ಮುಷ್ಕರ ಹಕ್ಕನ್ನು ನಿರಾಕರಿಸುವ ಕೈಗಾರಿಕಾ ವಿವಾದಗಳ ಮಸೂದೆಯನ್ನು ಅವರು ವಿರೋಧಿಸಿದರು.

1942 ರಿಂದ 1946 ರವರೆಗೆ ವೈಸ್ರಾಯ್ನ ಕಾರ್ಯನಿರ್ವಾಹಕ ಮಂಡಳಿಯ ಕಾರ್ಮಿಕ ಸದಸ್ಯರಾಗಿದ್ದ ಅವಧಿಯಲ್ಲಿ ಕಾರ್ಮಿಕ ವಿಷಯಗಳ ಬಗ್ಗೆ ಡಾ. ಅಂಬೇಡ್ಕರ್ ಅವರು ಹೊಂದಿದ್ದ ಆಳವಾದ ಜ್ಞಾನವನ್ನು ಸಾರ್ವತ್ರಿಕವಾಗಿ ಅಂಗೀಕರಿಸಲಾಯಿತು. ಅವರು ಸರ್ಕಾರದ ಕಾರ್ಮಿಕ ನೀತಿಗೆ ಮೂಲ ರಚನೆಗೆ ಅಡಿಪಾಯ ಹಾಕುವ ಮೂಲಕ ಕಾರ್ಮಿಕ ಕಲ್ಯಾಣಕ್ಕಾಗಿ ಕ್ರಮಗಳನ್ನು ಪರಿಚಯಿಸಿದರು.

ನವೆಂಬರ್ 8, 1943 ರಂದು ಅಂಬೇಡ್ಕರ್ ಮಂಡಿಸಿದ ಭಾರತೀಯ ಟ್ರೇಡ್ ಯೂನಿಯನ್ ತಿದ್ದುಪಡಿ ಮಸೂದೆ, ಕಾರ್ಮಿಕ ಸಂಘಗಳನ್ನು ಅಂಗೀಕರಿಸುವಂತೆ ಒತ್ತಾಯಿಸಿತು.ಫೆಬ್ರವರಿ 8, 1944 ರಂದು, ಕಲ್ಲಿದ್ದಲು ಗಣಿಗಳಲ್ಲಿ ಮಹಿಳೆಯರ ಉದ್ಯೋಗದ ಮೇಲಿನ ನಿಷೇಧವನ್ನು ತೆಗೆದುಹಾಕುವ ಚರ್ಚೆಯ ಸಂದರ್ಭದಲ್ಲಿ ಶಾಸಕಾಂಗ ಸಭೆಯಲ್ಲಿ ಅಂಬೇಡ್ಕರ್ ಹೇಳಿದರು: “ಯಾವುದೇ ಉದ್ಯಮದಲ್ಲಿ ಈ ತತ್ವವನ್ನು ಸ್ಥಾಪಿಸಲಾಗಿದೆ ಎಂದು ನಾನು ಭಾವಿಸುತ್ತೇನೆ . ಲಿಂಗತಾರತಮ್ಯವಿಲ್ಲದೆ ಸಮಾನ ಕೆಲಸಕ್ಕೆ ಸಮಾನ ವೇತನ ಸಿಗಬೇಕು” ಎಂದು ವಾದಿಸಿದರು. ಇದು ಒಂದು ಐತಿಹಾಸಿಕ ಕ್ಷಣ. ಗಣಿ ಹೆರಿಗೆ ಪ್ರಯೋಜನ ಮಸೂದೆ ಮಂಡಿಸುವ ಮೂಲಕ ಅವರು ಮಹಿಳಾ ಕಾರ್ಮಿಕರಿಗೆ ಮಾತೃತ್ವ ಸೌಲಭ್ಯಗಳೊಂದಿಗೆ ಅಧಿಕಾರ ನೀಡಿದರು.ನವೆಂಬರ್ 26, 1945 ರಂದು ನವದೆಹಲಿಯಲ್ಲಿ ನಡೆದ ಭಾರತೀಯ ಕಾರ್ಮಿಕ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಅಂಬೇಡ್ಕರ್, ಪ್ರಗತಿಪರ ಕಾರ್ಮಿಕ ಕಲ್ಯಾಣ ಶಾಸನವನ್ನು ತರುವ ತುರ್ತು ಅಗತ್ಯವನ್ನು ಒತ್ತಿ ಹೇಳಿದರು: “ಸರಿಯಾದ ಕಾರ್ಮಿಕ ಶಾಸನ ಸಂಹಿತೆಯನ್ನು ಹೊಂದಲು ಬ್ರಿಟಿಷರು 100 ವರ್ಷಗಳನ್ನು ತೆಗೆದುಕೊಂಡರು ಎಂದು ಹೇಳಬಹುದು. ನಾವು ಭಾರತದಲ್ಲಿಯೂ 100 ವರ್ಷಗಳನ್ನು ತೆಗೆದುಕೊಳ್ಳಬೇಕು ಎಂಬ ವಾದವಿಲ್ಲ. ಇತಿಹಾಸ ಯಾವಾಗಲೂ ಒಂದು ಉದಾಹರಣೆಯಲ್ಲ. ಹೆಚ್ಚಾಗಿ ಇದು ಒಂದು ಎಚ್ಚರಿಕೆ” ಎಂದು ಹೇಳಿದರು.

ಖಾಸಗಿ ಆಸ್ತಿಯನ್ನು ರದ್ದುಪಡಿಸುವುದರಿಂದ ಬಡತನ ಮತ್ತು ಸಂಕಟಗಳಿಗೆ ಅಂತ್ಯವಾಗಲಿದೆ ಎಂಬ ಮಾರ್ಕ್ಸ್ವ ನಿಲುವನ್ನು ಡಾ. ಅಂಬೇಡ್ಕರ್ ಒಪ್ಪಲಿಲ್ಲ. “ಬುದ್ಧ ಅಥವಾ ಕಾರ್ಲ್ ಮಾರ್ಕ್ಸ್” ಕೃತಿಯಲ್ಲಿ ಭಾರತದ ಮಟ್ಟಿಗೆ ಭಗವಾನ್ ಬುದ್ಧರ ಆರ್ಥಿಕ ನೀತಿಯನ್ನು ಎತ್ತಿ ಹಿಡಿದಿದ್ದಾರೆ.

ಕೆಲಸದ ಸಮಯವನ್ನು 14 ಗಂಟೆಗಳಿಂದ 8 ಗಂಟೆಗಳಿಗೆ ಇಳಿಕೆ. ಮಹಿಳಾ ಕಾರ್ಮಿಕರಿಗಾಗಿ ಗಣಿ ಹೆರಿಗೆ ಪ್ರಯೋಜನ ಕಾಯ್ದೆ, ಮಹಿಳಾ ಕಾರ್ಮಿಕ ಕಲ್ಯಾಣ ನಿಧಿ, ಮಹಿಳೆಯರು ಮತ್ತು ಮಕ್ಕಳು, ಕಾರ್ಮಿಕ ಸಂರಕ್ಷಣಾ ಕಾಯ್ದೆ, ಮಹಿಳಾ ಕಾರ್ಮಿಕರಿಗೆ ಹೆರಿಗೆ ಲಾಭ, ಭಾರತೀಯ ಕಾರ್ಖಾನೆ ಕಾಯ್ದೆ. ಭಾರತದಲ್ಲಿ ಉದ್ಯೋಗ ವಿನಿಮಯ ಕೇಂದ್ರಗಳ ಸ್ಥಾಪನೆ. ಕಾರ್ಮಿಕರಿಗೆ ವೈದ್ಯಕೀಯ ಆರೈಕೆ, ವೈದ್ಯಕೀಯ ರಜೆ, ಕೆಲಸದ ಸಮಯದಲ್ಲಿ ದೈಹಿಕವಾಗಿ ಅಂಗವಿಕಲರಾಗಿದರೆ ಅದಕ್ಕೆ ಪರಿಹಾರವಾಗಿ ವಿವಿಧ ಸೌಲಭ್ಯಗಳನ್ನು ಒದಗಿಸುವ ಕಾರ್ಮಿಕ ಕಲ್ಯಾಣ ನಿಧಿ ಸ್ಥಾಪನೆ. ಕಾರ್ಮಿಕ ಕಲ್ಯಾಣದ ವಿಷಯಗಳ ಬಗ್ಗೆ ಸಲಹೆ ನೀಡಲು ಸಲಹಾ ಸಮಿತಿಯ ರಚನೆ. ಇವು ಡಾ. ಅಂಬೇಡ್ಕರ್ ಅವರು ಕಾರ್ಮಿಕರಿಗೆ ನೀಡಿದ ಅದ್ಭುತ ಕೊಡುಗೆಗಳು.

ರಾಷ್ಟ್ರ ನಿರ್ಮಾಣದಲ್ಲಿ ಅಸಂಖ್ಯಾತ ಕಾರ್ಮಿಕರ ಅಸಂಖ್ಯಾತ ಕೊಡುಗೆಯನ್ನು ನೆನಪಿಸಿಕೊಳ್ಳುವಾಗ ನಾವು ಕಾರ್ಮಿಕರಿಗೆ ಡಾ. ಅಂಬೇಡ್ಕರ್ ಅವರ ಕೊಡುಗೆಗಳನ್ನು ನೆನಪಿಸಿಕೊಳ್ಳಬೇಕು. ಆದರೆ ಜಾತಿವಾದಿ ಮನಸ್ಸಿನ ಭಾರತದ ಕಾರ್ಮಿಕ ನಾಯಕರು ಡಾ. ಅಂಬೇಡ್ಕರರ ಕೊಡುಗೆಗಳನ್ನು ಮರೆಮಾಚುತ್ತ ಬಂದಿರುವುದು ದುರಂತವಲ್ಲವೆ...???